ಮುಂಬೈ:- ಅಭಿಮಾನಿಗಳ ನೆಚ್ಚಿನ ನಟಿಯಾಗಿರುವ ಈ ನಟಿ ತಮ್ಮ 15ನೇ ವಯಸ್ಸಿನಲ್ಲಿ ಹಿಟ್ ಸಿನಿಮಾ ನೀಡಿದ್ದಾರೆ. ಆದರೆ, ನಂತರ ಅವರು ಚಿತ್ರಗಳಿಗೆ ವಿದಾಯ ಹೇಳಬೇಕಾಯಿತು. ಬಾಲ್ಯದಲ್ಲಿ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 12ನೇ ವಯಸ್ಸಿನಲ್ಲಿ ಕುಷ್ಠರೋಗ ಇರುವುದು ಪತ್ತೆಯಾಯಿತು. ಆದರೂ, ಅವರು ತಮ್ಮ ಮೊದಲ ಚಿತ್ರದಲ್ಲಿ ಹಿಟ್ ನೀಡಿ ರಾತ್ರೋರಾತ್ರಿ ತಾರೆಯಾದರು.
ಈ ಪ್ರಸಿದ್ದ ನಟಿ ಬೇರೆ ಯಾರು ಅಲ್ಲ, ಅವರೇ ಡಿಂಪಲ್ ಕಪಾಡಿಯಾ. ಡಿಂಪಲ್ ಕೇವಲ 14 ವರ್ಷದವಳಿದ್ದಾಗ ಬಾಬಿ ಸಿನಿಮಾಗೆ ನಟಿಯಾಗಿ ಆಯ್ಕೆಯಾದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸನ್ನು ಕಂಡಿತು. ಆದ್ದರಿಂದ ನಟಿ ತಮ್ಮ ಮೊದಲ ಸಿನಿಮಾದಿಂದಲೇ ರಾತ್ರೋರಾತ್ರಿ ಸ್ಟಾರ್ ಪಟ್ಟ ಪಡೆದುಕೊಂಡರು.
ತಾರೆಯಾಗುವ ಮೊದಲು ಡಿಂಪಲ್ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬುವುದು ಯಾರಿಗೂ ತಿಳಿದಿಲ್ಲ. ಈ ವಿಷಯದ ಕುರಿತು ಅವರೇ ಸ್ವತಃ ಒಂದು ಸಂದರ್ಶನದಲ್ಲಿ ಮಾತನಾಡಿದ್ದರು.
ಡಿಂಪಲ್ 12 ವರ್ಷದವಳಿದ್ದಾಗ, ಅವರಿಗೆ ಕುಷ್ಠರೋಗ ಇರುವುದು ಪತ್ತೆಯಾಯಿತು. ಈ ಸಮಯದಲ್ಲಿ ರಾಜ್ ಕಪೂರ್ ಅವರ ಸ್ಥಿತಿಯ ಬಗ್ಗೆ ತಿಳಿದುಕೊಂಡು ಡಿಂಪಲ್ ಅವರನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ರಾಜ್ ಕಪೂರ್ ಡಿಂಪಲ್ ಅವರನ್ನು ನೋಡಿದಾಗ, ಅವರು ‘ಬಾಬಿ’ ಚಿತ್ರಕ್ಕಾಗಿ ಇವರನ್ನೇ ಆಯ್ಕೆ ಮಾಡಿದರು. ನಂತರ ಚಿಕಿತ್ಸೆಯ ಮೂಲಕ ಡಿಂಪಲ್ ಈ ಕಾಯಿಲೆಯಿಂದ ಗುಣಮುಖರಾಗಿ ಅನೇಕ ಹಿಟ್ ಚಿತ್ರಗಳನ್ನು ನೀಡಿದರು.
ತಾರಾಪಟ್ಟದ ಉತ್ತುಂಗಕ್ಕೇರುತ್ತಿದ್ದಂತೆ, ಡಿಂಪಲ್ ತೆಗೆದುಕೊಂಡ ಆ ಒಂದು ನಿರ್ಧಾರ ಎಲ್ಲರಿಗೂ ಆಘಾತವನ್ನುಂಟು ಮಾಡಿತು. 15 ನೇ ವಯಸ್ಸಿನಲ್ಲಿ ಅವರು, ಆ ಕಾಲದ ಅತಿದೊಡ್ಡ ಸೂಪರ್ಸ್ಟಾರ್ ಮತ್ತು ಅವರ ಕ್ರಶ್ ಆಗಿದ್ದ 30 ವರ್ಷದ ರಾಜೇಶ್ ಖನ್ನಾ ಅವರನ್ನು ವಿವಾಹವಾದರು. ಡಿಂಪಲ್ ಖನ್ನಾ ಅವರ ದೊಡ್ಡ ಅಭಿಮಾನಿಯಾಗಿದ್ದರು. ನಟಿ ವಿಮಾನದಲ್ಲಿ ಅವರನ್ನು ಭೇಟಿಯಾದ ನಂತರ ಮದುವೆಯಾಗಲು ನಿರ್ಧರಿಸಿದರು. ಮದುವೆಯ ನಂತರ, ಅವರು ತಮ್ಮ ವೃತ್ತಿಜೀವನವನ್ನು ಸ್ಥಗಿತಗೊಳಿಸಿ ಸಂಪೂರ್ಣವಾಗಿ ಕುಟುಂಬ ಜೀವನದ ಮೇಲೆ ಕೇಂದ್ರೀಕರಿಸಿದರು. ರಾಜೇಶ್ ಖನ್ನಾ ಮತ್ತು ಡಿಂಪಲ್ ಅವರಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕು ಖನ್ನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
ಕಾಲ ಕಳೆದಂತೆ ಎಲ್ಲವೂ ಬದಲಾಗತೊಡಗಿತು. ರಾಜೇಶ್ ಖನ್ನಾ ಅವರ ಚಿತ್ರಗಳು ಸೋಲಲು ಪ್ರಾರಂಭಿಸಿದವು ಮತ್ತು ಅದು ಅವರ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು. ಇದರ ಪರಿಣಾಮ ಡಿಂಪಲ್ ಮತ್ತು ರಾಜೇಶ್ ಅವರ ಸಂಬಂಧ ಮುರಿದುಬಿತ್ತು. ಅಂತಿಮವಾಗಿ, ಡಿಂಪಲ್ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ರಾಜೇಶ್ ಖನ್ನಾ ಅವರಿಂದ ದೂರವಾದರು. ರಾಜೇಶ್ ಖನ್ನಾ ಅವರ ಬಂಗಲೆಯಲ್ಲಿ ಒಂಟಿಯಾಗಿ ವಾಸಿಸಲು ಪ್ರಾರಂಭಿಸಿದರು. ಆದರೆ, ಡಿಂಪಲ್ ಅಲ್ಲಿಗೆ ನಿಲ್ಲಲಿಲ್ಲ. 25ನೇ ವಯಸ್ಸಿನಲ್ಲಿ, ಅವರು ಮತ್ತೆ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರದಲ್ಲಿ ಡಿಂಪಲ್ ರಿಷಿ ಕಪೂರ್ ಅವರೊಂದಿಗೆ ‘ಸಾಗರ್’ ಚಿತ್ರ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಯಿತು. ಈ ರೀತಿ ಡಿಂಪಲ್ ತಮ್ಮ ಸಣ್ಣ ವಯಸ್ಸಿನಿಂದಲೂ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದು, ಈ ಎಲ್ಲ ತೊಂದರೆಗಳ ನಡುವೆಯೂ ನಟಿ ಕುಗ್ಗದೆ ಸಿನಿಮಾಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ.
Leave feedback about this