ಬೆಂಗಳೂರು:- ಧರ್ಮಸ್ಥಳದ ಸುತ್ತಮುತ್ತಲು ನೂರಾರು ಶವಗಳನ್ನು ಹೂತಿಡಲಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿದರು.
ಧರ್ಮಸ್ಥಳದ ಸುತ್ತಮುತ್ತ ಹಲವು ಶವಗಳನ್ನು ಹೂತಿರುವುದಾಗಿ ಅನಾಮಿಕ ವ್ಯಕ್ತಿ ಹೇಳಿಕೊಂಡ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಸರ್ಕಾರ ರಚಿಸಿರುವ ಎಸ್ಐಟಿ ತನಿಖೆಯ ಮಧ್ಯಂತರ ವರದಿಯನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ಸರ್ಕಾರ ಎಸ್ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಆರ್.ಅಶೋಕ್ ಎಚ್ಚರಿಕೆ ನೀಡಿದರು. ಎಸ್ಐಟಿಯು ಬುರಡೆ ರಹಸ್ಯ ಉತ್ಖನನ ಕಾರ್ಯವನ್ನು ಅಂತ್ಯಗೊಳಿಸಿದ ಬಗ್ಗೆ ಮಾತಾಡಿರುವ ಅಶೋಕ್ ಅವರು, ಪ್ರತಿದಿನ ಒಂದು ಲಕ್ಷ ಕೇಸ್ ಬರುತ್ತವೆ. ಸದನದಲ್ಲಿ ನಾವು ಗಲಾಟೆ ಮಾಡಿದರೂ ನೀವುಗಳು ಎಸ್ಐಟಿ ರಚನೆ ಮಾಡಲ್ಲ. ಆದರೆ, ಈ ವಿಚಾರವಾಗಿ ಅಷ್ಟು ಬೇಗ ಎಸ್ಐಟಿ ರಚನೆ ಮಾಡಿದ್ದೀರಿ. ಕಾರಣ, ಸಿದ್ದರಾಮಯ್ಯ ಸುತ್ತ ಒಂದು ರೀತಿ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ ಎಂದು ಕಿಡಿಕಾರಿದರು.
ಪ್ರಕರಣ ಸಂಬಂಧ ಡಿಕೆಶಿ ಅವರು ಷಡ್ಯಂತ್ರ ಅಂತಾ ಹೇಳಿದ್ದಾರೆ. ಡಿಕೆಶಿ ಹೇಳಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ನಾನು ಸದನದಲ್ಲಿ ಡಿಮ್ಯಾಂಡ್ ಮಾಡುತ್ತೇನೆ. ಎಸ್ಐಟಿಯ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಆ ಷಡ್ಯಂತ್ರ ಮಾಡಿದ್ದು ಯಾರು ಎಂದೂ ಹೇಳಬೇಕು. ಇಲ್ಲವಾದಲ್ಲಿ ನಾವು ಸದನದಲ್ಲಿ ಗಲಾಟೆ ಮಾಡುತ್ತೇವೆ. ಆ ಅನಾಮಿಕ ಹುಚ್ಚನಾ ಅಂತಾ ನೋಡಬೇಕಿತ್ತು. ಸುಮ್ಮನೇ ಎಸ್ಐಟಿ ತನಿಖೆ ಮಾಡೋದಲ್ಲ ಎಂದು ಕುಟುಕಿದರು.
ಧರ್ಮಸ್ಥಳ ಭಾಗದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಹೇಳುತ್ತಿರುವ ವ್ಯಕ್ತಿ ಮತಾಂತರಗೊಂಡಿದ್ದಾನೆ ಎಂಬ ವದಂತಿಗಳಿವೆ. ಆತನ ಹಿನ್ನೆಲೆಯ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಅಶೋಕ್ ಒತ್ತಾಯಿಸಿದರು. ಹೂತಿಟ್ಟಿರುವ ಶವಗಳನ್ನು ತೋರಿಸುವುದಾಗಿ ಹೇಳುತ್ತಿರುವ ಮಾಸ್ಕ್ ಮ್ಯಾನ್ ಯಾರು, ಆತನ ಹೆಸರು ಏನು? ಭೀಮ ಎಂದು ಹೇಳಲಾಗುತ್ತಿದೆ. ಆದರೆ, ಅದು ಆತನ ನಿಜವಾದ ಹೆಸರಲ್ಲ. ಆ ವ್ಯಕ್ತಿ ಮತಾಂತರಗೊಂಡಿದ್ದಾನೆ ಎನ್ನಲಾಗುತ್ತಿದೆ ಎಂದು ಆರೋಪಿಸಿದರು.
Leave feedback about this