ದೆಹಲಿ:- ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪವಿತ್ರಾ ಗೌಡರನ್ನ ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆ ನಡೆಯಲು ನೀವೇ ಕಾರಣ ಅಲ್ಲವಾ? ಎಂದು ನೇರವಾಗಿ ಪ್ರಶ್ನೆ ಮಾಡಿದೆ.
ಈ ಪ್ರಕರಣದಲ್ಲಿ ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಅರ್ಜಿಯ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ಅಪರಾಧಿಗಳ ಮನಸ್ಸಲ್ಲಿ ನಡುಕ ಹುಟ್ಟಿಸುವ ಪ್ರಶ್ನೆಗಳನ್ನ ಕೇಳಿದೆ. ನ್ಯಾಯಾಲಯ ಕೇಳಿದ ಪ್ರಶ್ನೆಗೆ ಪವಿತ್ರಾ ನಡುಗಿದ್ದು, ಜಾಮೀನು ರದ್ದಾಗುವ ಭಯ ಕಾಡಿದೆ.
ಪವಿತ್ರಾ ಗೌಡ ಪರ ವಾದ ಮಂಡಿಸಿದ ವಕೀಲೆ, ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಅವರ ಮೇಲೆ ಯಾವುದೇ ದೊಡ್ಡ ಮಟ್ಟದ ಹಲ್ಲೆ ಮಾಡಿಲ್ಲ. ಅವರು ಕೇವಲ ಚಪ್ಪಲಿಯಿಂದ ಹೊಡೆದಿದ್ದಾರೆ. ಅವರಿಂದ ಸಣ್ಣ ಗಾಯ ಸಹ ಆಗಿಲ್ಲ ಎಂದು ಹೇಳಿದ್ದಾರೆ. ಇದನ್ನ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಕರಣ ಆಗಲು ನೀವೇ ಕಾರಣ ಅಲ್ವಾ? ನೀವು ಇಲ್ಲದಿದ್ದರೆ ಆರೋಪಿ ದರ್ಶನ್ ಸಹ ಆಸಕ್ತಿ ವಹಿಸುತ್ತಿರಲಿಲ್ಲ ಅಲ್ಲವೇ ಎಂದು ನೇರಾ ನೇರ ಪ್ರಶ್ನೆ ಕೇಳಿದ್ದಾರೆ.
ಇನ್ನು ಸದ್ಯ ನಟ ದರ್ಶನ್ ಶೂಟಿಂಗ್ ಸಲುವಾಗಿ ಥೈಲ್ಯಾಂಡ್ನಲ್ಲಿ ಇದ್ದಾರೆ. ಆದರೆ, ಸುಪ್ರೀಂಕೋರ್ಟ್ ಹೇಳಿರುವ ಮಾತುಗಳು ಅವರಲ್ಲಿ ಭಯ ಹುಟ್ಟಿಸಿದ್ದು, ಜಾಮೀನು ರದ್ದಾಗುವ ಭಯ ಅವರನ್ನ ಕಾಡುತ್ತಿದೆ. ಇನ್ನು ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ಕರ್ನಾಟಕ ಹೈಕೋರ್ಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನಾವು ಆರೋಪಿಗೆ ಶಿಕ್ಷೆ ನೀಡುವುದಿಲ್ಲ ಹಾಗೂ ದೋಷಮುಕ್ತ ಎಂದು ಸಹ ಆದೇಶ ನೀಡುವುದಿಲ್ಲ. ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಹೇಳಿದೆ.
ಒಂದು ವಾರದ ಅವಧಿಯಲ್ಲಿ ಸುಪ್ರೀಂ ಕೋರ್ಟ್, ದರ್ಶನ್ ಕೇಸ್ ವಿಚಾರವಾಗಿ ಎರಡನೇ ಬಾರಿ ಹೈಕೋರ್ಟ್ ಅನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಿಯಾಗಿ ವಿವೇಚನೆ ಬಳಸಿ ನಿರ್ಧಾರ ಮಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದೆ. ಇನ್ನು ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರ ಪೀಠ ಹೇಳಿದ್ದು, ಜಾಮೀನು ಆದೇಶದಲ್ಲಿ ಬಳಕೆ ಮಾಡಲಾದ ಭಾಷೆಯ ಬಗ್ಗೆ ಸುಪ್ರೀಂ ಕೋರ್ಟ್ ವಿಷಾಧ ವ್ಯಕ್ತಪಡಿಸಿದೆ. ಆರೋಪಿಗಳು ನಿರಾಪರಾಧಿಗಳು ಎನ್ನುವ ರೀತಿ ಇದ್ದು, ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇದೇ ರೀತಿ ಆದೇಶ ನೀಡುತ್ತದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಅಂತಹ ತಪ್ಪು ಮಾಡುವುದನ್ನ ಒಪ್ಪಿಬಿಡಬಹುದು. ಆದರೆ, ಹೈಕೋರ್ಟ್ ನ್ಯಾಯಾಧೀಶರು ಮಾಡಿದ್ದು ಆಶ್ಚರ್ಯಕರ ಎಂದಿದೆ.
Leave feedback about this