ತುಮಕೂರು:- ಸಂಪುಟದಿಂದ ವಜಾಗೊಂಡ ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ಇದ್ದ ಕಾಂಗ್ರೆಸ್ನ ಹಿರಿಯ ಶಾಸಕ ಕೆ.ಎನ್ ರಾಜಣ್ಣ ಇಂದು ಮಧುಗಿರಿಗೆ ಭೇಟಿ ನೀಡಿದರು. ತಮ್ಮ ಖಾಸಗಿ ಕಾರಿನಲ್ಲಿ ಮಧುಗಿರಿಗೆ ಆಗಮಿಸಿದ ರಾಜಣ್ಣ, 79ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿದ ಅವರು, ಮಂತ್ರಿಗಿರಿ ಹೋಯ್ತು ಎನ್ನುವ ಬೇಸರ ನನಗಿಲ್ಲ ಎಂದಿದ್ದಾರೆ. ನನ್ನ ಸಚಿವ ಸ್ಥಾನ ತೆಗೆಯುವುದು ಮುಖ್ಯಮಂತ್ರಿಗೆ ಗೊತ್ತಿರಲಿಲ್ಲ. ಮೂವರು ದೆಹಲಿಯಲ್ಲಿ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಅದು ಆಗಿಲ್ಲ. ವಿಧಾನಸೌಧದಲ್ಲಿ ಸಿದ್ದರಾಮಯ್ಯ ಇದ್ದಾಗ ರಾಹುಲ್ ಗಾಂಧಿಯವರು ಕರೆ ಮಾಡಿದ್ದರು. ಕಾರಣ ಏನಿದೆ ಅಂತಾ ನನಗೆ ಗೊತ್ತಿಲ್ಲ. ಯಾವುದೇ ಸ್ಟೇಟ್ಮೆಂಟ್ ಅಂತಲ್ಲ ಸತ್ಯವನ್ನೇ ನಾನು ಹೇಳಿದ್ದೇನೆ ಎಂದಿದ್ದಾರೆ.
ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ಕೆ.ಎನ್ ರಾಜಣ್ಣ ಕೂಡಲೇ ರಾಜೀನಾಮೆ ನೀಡಬೇಕಾಯಿತು. ಇದೇ ವಿಚಾರದ ಬಗ್ಗೆ ಮಾತಾಡಿದ ರಾಜಣ್ಣ, ‘ನಾನು ದೆಹಲಿಗೆ ತೆರಳುತ್ತಿದ್ದೇನೆ ಅಲ್ಲಿಂದ ಬಂದ ನಂತರ ಸಿಹಿ ಸುದ್ದಿ ನೀಡುತ್ತೇನೆ. ಅಲ್ಲದೆ ನಾನು ವಜಾಗೊಳ್ಳುವಂತೆ ಮಾಡಿರುವುದರ ಹಿಂದೆ ಮೂವರು ದೆಹಲಿಯಲ್ಲಿ ಕುಳಿತು ಕಿತೂರಿ ನಡೆಸಿದ್ದಾರೆ’ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿಗೆ ಹೋಗಲ್ಲ ಎಂದ ರಾಜಣ್ಣ: ಬಿಜೆಪಿಗೆ ಬರುವಂತೆ ರಾಜಣ್ಣಗೆ ಶ್ರೀರಾಮುಲು ಆಹ್ವಾನ ನೀಡಿರುವ ಬಗ್ಗೆ ಮಾತಾಡಿದ ರಾಜಣ್ಣ, ‘ಶ್ರೀರಾಮುಲು ಪ್ರೀತಿ ಮತ್ತು ವಿಶ್ವಾಸದಿಂದ ಹಾಗೆ ಹೇಳಿಕೆ ನೀಡಿರಬಹುದು. ಶ್ರೀರಾಮುಲು ಹೇಳಿದರು ಅಂತಾ ಬಿಜೆಪಿಗೆ ಹೋಗಲು ಆಗುತ್ತಾ, ಕಾಂಗ್ರೆಸ್ ನನಗೇನು ಕಡಿಮೆ ಮಾಡಿದೆ’ ಎಂದು ಪ್ರಶ್ನಿಸಿದ್ದಾರೆ.
ದೆಹಲಿಗೆ ಹೋಗಿ ಬಂದ ಮೇಲೆ ಸಿಹಿ ಸುದ್ದಿ ಕೊಡುತ್ತೇನೆ, ನನಗೆ ಅಧಿಕಾರದ ಅಗತ್ಯವಿಲ್ಲ. ಇಲ್ಲಿವರೆಗೂ ಯಾವ ರಾಜಣ್ಣನಾಗಿ ಇದ್ನೋ ಅದೇ ರೀತಿ ಇನ್ನೂ ಹತ್ತು ಪಟ್ಟು ಹೆಚ್ಚಾಗಿರ್ತಿನಿ. ಸಿದ್ದರಾಮಯ್ಯ ಮೇಲೆ ಯಾರೂ ಆಕ್ಷೇಪಣೆ ಮಾಡಬಾರದು. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಯುವ ಜನತೆಯನ್ನ ಎಚ್ಚರಿಸುವ ಕೆಲಸ ಮಾಡ್ತಿದ್ದಾರೆ ಎಂದು ರಾಜಣ್ಣ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.
‘ಅಧಿಕಾರ ಯಾರಿಗೂ ಶಾಶ್ವತವಲ್ಲ, ಮಂತ್ರಿಗಿರಿ ಹೋಗಿದ್ದಕ್ಕೆ ನನಗೆ ಯಾವ ಬೇಸರವಿಲ್ಲ ಎಂದು ಮಾಜಿ ಸಚಿವ ಕೆ ಎನ್ ರಾಜಣ್ಣ ಮಾತು ಶುರು ಮಾಡಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ, ದೇವರಾಜು ಅರಸು ಅವರಿಗೂ ಕೂಡ ಇದೇ ಅನುಭವ ಆಗಿತ್ತು ಎಂದಿದ್ದಾರೆ.
ಹಾಸನದಲ್ಲಿ ಸೂಟು ಬೂಟು ಟೈ ಹಾಕಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ಈಗ ನನಗೆ ಮತ್ತೆ ನಿಮ್ಮ ಜೊತೆ ಸಾಮಾನ್ಯ ಮನುಷ್ಯನಾಗಿ ನಿಲ್ಲುವ ಅವಕಾಶ ಕಲ್ಪಿಸಿಕೊಟ್ಟಿದ್ದೀರಿ. ನಾನು ಅಧಿಕಾರಕ್ಕಾಗಿ ಅಂಟಿ ಕೂರುವವನಲ್ಲ. ನನಗೆ ಈ ಬಗ್ಗೆ ಯಾವುದೇ ಬೇಸರವೂ ಇಲ್ಲ ಎಂದು ರಾಜಣ್ಣ ಒತ್ತಿ ಹೇಳಿದ್ದಾರೆ.
Leave feedback about this