ರಾಯಚೂರು

ಶಾಸಕಿ ಕರೆಮ್ಮ ನಾಯಕ್ ರಾತ್ರಿ ಟೋಲ್ ಗೇಟ್ ನಲ್ಲೇ ಮಲಗಿ ಪ್ರತಿಭಟನೆ

ರಾಯಚೂರು:- ರಾಜ್ಯ ಸರಕಾರ ಜೆಡಿಎಸ್ ಶಾಸಕರನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅನುದಾನ ನೀಡುತ್ತಿಲ್ಲ. ಜೊತೆಗೆ ಅವೈಜ್ಞಾನಿಕ ಟೋಲ್ ಗೇಟ್ ಅಳವಡಿಸುವ ಮೂಲಕ ನನ್ನ ಕ್ಷೇತ್ರದಲ್ಲಿ ನನ್ನ ಹೆಸರು ಹಾಳು ಮಾಡುತ್ತಿದೆ. ಈ ಹಿನ್ನೆಲೆ ಕೂಡಲೇ ಟೋಲ್ ತೆಗೆಯಬೇಕು ಎಂದು ಆಗ್ರಹಿಸಿ ಶಾಸಕಿಯೊಬ್ಬರು ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಕಾಕರಗಲ್ ಬಳಿ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅಹೋರಾತ್ರಿ ಧರಣಿ ನಡೆಸಿದ್ದಾರೆ. ನಡುರಸ್ತೆಯಲ್ಲಿ ತಮ್ಮ ಹೋರಾಟ ಮುಂದುವರೆಸಿದ್ದಾರೆ. ರಾತ್ರಿ ಟೋಲ್ ಗೇಟ್ ನಲ್ಲೇ ಮಲಗಿ ಪ್ರತಿಭಟನೆ ಮಾಡುತ್ತಿದ್ದಾರೆ.

ಅವೈಜ್ಞಾನಿಕವಾಗಿ 40 ಕಿ.ಮೀ ಅಂತರದೊಳಗೆ ಎರಡು ಟೋಲ್ ಗೇಟ್ ಅಳವಡಿಕೆ ಮಾಡಿದ್ದಾರೆ ಎಂದು ಶಾಸಕಿ ಕರೆಮ್ಮ ನಾಯಕ್ ಆರೋಪಿಸಿದ್ದಾರೆ. ರಾಯಚೂರಿನಲ್ಲಿ ನಡೆದ ಕೆಡಿಪಿ‌ ಸಭೆಯಲ್ಲೂ ಪ್ರತಿಭಟನೆ ಮಾಡಿದ್ದರು. ಟೋಲ್ ಗೇಟ್ ರದ್ದುಪಡಿಸುವಂತೆ ಆಗ್ರಹಿಸಿ ಸಭೆಯಲ್ಲಿ ಧರಣಿ ಕುಳಿತಿದ್ದರು. ತಾತ್ಕಾಲಿಕ‌ವಾಗಿ ಸ್ಥಗಿತಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದರು. ಆದರೆ, ಟೋಲ್ ಗೇಟ್ ಚಾಲನೆಯಲ್ಲಿರುವುದರಿಂದ ಶಾಸಕಿ ಹೋರಾಟ ಮುಂದುವರೆಸಿದ್ದಾರೆ.

6 ವರ್ಷಗಳ ಹಿಂದೆ ಪೂರ್ಣಗೊಂಡ ರಸ್ತೆಗೆ ಈಗ ಟೋಲ್ ನಿರ್ಮಾಣ ಮಾಡುತ್ತಿದ್ದಾರೆ. ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡದೇ ಏಕಾಏಕಿ ಟೋಲ್ ಸ್ಥಾಪಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ನಿಯಮದ ಪ್ರಕಾರ 60 ಕಿಲೋ ಮೀಟರ್ ಒಳಗೆ ಎರಡು ಟೋಲ್ ಮಾಡಬಾರದು. ಸರ್ವಿಸ್ ರಸ್ತೆ ಮಾಡಬೇಕು. ಟೋಲ್ ಬಳಿ ವಿಶಾಲ ರಸ್ತೆ ಮಾಡಬೇಕು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಶೌಚಾಲಯ ಮಾಡಬೇಕು. ಆದರೆ, ಇದು ಯಾವುದು ಇಲ್ಲಿ ಮಾಡದೇ ಟೋಲ್ ವಸೂಲಿ ಮಾಡಲಾಗುತ್ತಿದೆ. ಆರಂಭದಲ್ಲಿ ಸ್ಥಳಿಯರಿಗೆ ಮತ್ತು ರೈತರಿಗೆ ಟೋಲ್ ವಿಧಿಸಲ್ಲ ಎಂದಿದ್ದರು. ಇದೀಗ ದಬ್ಬಾಳಿಕೆಯಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಕರೆಮ್ಮ ನಾಯಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಸಮಸ್ಯೆ ‌ಆಲಿಸಬೇಕಾದ ಶಾಸಕರೇ ನ್ಯಾಯಕ್ಕಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿರುವುದು ಗಮನ ಸೆಳೆದಿದೆ. ಅನುದಾನ ನೀಡದೇ ಸರಕಾರ ಕ್ಷೇತ್ರದಲ್ಲಿ ಹೆಸರು ಕೆಡಿಸುವ ಕೆಲಸ ಮಾಡುತ್ತಿದೆ ಎಂದು ಶಾಸಕಿ ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಮುಂದುವರೆದ ಶಾಸಕರ ಹೋರಾಟಕ್ಕೆ ಸರಕಾರ ಮನ್ನಣೆ ನೀಡುತ್ತಾ, ಟೋಲ್ ತೆಗೆಯುತ್ತಾ ಕಾದು ನೋಡಬೇಕಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video