ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಇಂದು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕವಾಗಿ ಪ್ರಾಯಶ್ಚಿತ ಮೌನ ಪ್ರತಿಭಟನೆ ನಡೆಸಲಾಗಿದೆ.
ಶಾಸಕಿ ವಿರುದ್ಧ ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದಿಂದ ಗಂಭೀರ ಆಕ್ರೋಶ ವ್ಯಕ್ತವಾಗುತ್ತಿದ್ದು, ನಗರದ ನ್ಯಾಯಾಲಯದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಎದುರು ಈ ಮೌನ ಪ್ರತಿಭಟನೆ ನಡೆಯಿತು. ಈ ಮೂಲಕ ಶಾಸಕಿಯ ಗೆಲುವಿಗೆ ಶ್ರಮಿಸಿ ತಪ್ಪು ಮಾಡಿದ್ದೇವೆ ಎಂದು ಪ್ರತಿಭಟನಾಕಾರರು ಖಂಡನೆ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಮೂಡಿಗೆರೆಯಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಕೇಸರಿ ಶಾಲು ಧರಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರಿಂದ ಇದು ಹಲವರನ್ನು ಹುಬ್ಬೇರುವಂತೆ ಮಾಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ್ದ ಶಾಸಕಿ, ಇಂದು ಕೇಸರಿ ಶಾಲು ಹಾಕಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಈ ಬಗ್ಗೆ ಹಲವರಿಗೆ ಪ್ರಶ್ನೆಗಳಿವೆ. ನದಿ ಎಂದರೆ ಕಾಂಗ್ರೆಸ್ಸಾ, ದಡ ಎಂದರೆ ಬಿಜೆಪಿಯಾ ಎಂಬ ಶಂಕೆ ಬೇಡ ಎಂದಿದ್ದರು. ಅಲ್ಲದೇ ಓರ್ವ ಹಿಂದೂವಾಗಿ, ದಲಿತೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ಮುಂದೆ ಬಿಜೆಪಿಗೆ ಹೋಗ್ತಿನೊ, ಕಾಂಗ್ರೆಸ್ಸಿನಲ್ಲೇ ಉಳಿತಿನೋ, ಬಿಎಸ್‌ಪಿ ಅಥವಾ ಎಸ್‌ಡಿಪಿಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ ಎಂದು ಹೇಳಿದ್ದರು.
ನಾನು ಗಣಪತಿಗಾಗಿ, ಧರ್ಮಕ್ಕಾಗಿ ಬಂದಿದ್ದೇನೆ. ಶಾಸಕಿಯಾಗಿ ಪಕ್ಷ ಪ್ರತಿನಿಧಿಸುವುದು ಆ ನಂತರ, ಈಗ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಯಾವ ಪಕ್ಷದವರಿಗೂ ಪ್ರಶ್ನೆಗಳು ಉಳಿಯಬಾರದು ಎಂದು ಸ್ಪಷ್ಟಪಡಿಸಿದ್ದರು.
ಕಾಂಗ್ರೆಸ್ ಶಾಸಕಿಯಾಗಿಯೂ ನಿಂತಿದ್ದೇನೆ. ಅದನ್ನು ಗುರುತಿಸಿಕೊಳ್ಳಲೇಬೇಕು. ಅದರ ಜೊತೆಗೆ ಸಾಕಷ್ಟು ಅಸ್ತಿತ್ವಗಳು ಇವೆ. ಅದನ್ನೆಲ್ಲಾ ಸೇರಿಸಿಕೊಂಡು ನಯನಾ ಮೋಟಮ್ಮ ಆಗಿದ್ದೇನೆ. ಯಾರೂ ಕೂಡ ಹುಟ್ಟುವಾಗಲೇ ಇಂತಹ ಜಾತಿ-ಧರ್ಮ, ಹೆಣ್ಣು-ಗಂಡು ಎಂದು ಹುಟ್ಟಿರುವುದಿಲ್ಲ ಎಂದು ಹೇಳಿಕೆ ಕೂಡ ನೀಡಿದ್ದರು. ಹೀಗಾಗಿ ಶಾಸಕಿ ಹಲವರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು.
ಇನ್ನು ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ ಶಾಸಕಿ, ಇದು ಸಾರ್ವಜನಿಕ ಗಣಪತಿಯೇ ಹೊರತು ಯಾವುದೇ ಪಕ್ಷ, ಧರ್ಮಕ್ಕೆ ಸೀಮಿತವಲ್ಲ. ಮೂಡಿಗೆರೆ ಕ್ಷೇತ್ರದಲ್ಲಿ ಸಾರ್ವಜನಿಕರ ಶ್ರೀ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ವತಿಯಲ್ಲಿ ನಡೆದ ಕಾರ್ಯಕ್ರಮವು ಸುಮಾರು 40 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷವೂ ಎಲ್ಲಾ ಪಕ್ಷದವರು ಧರ್ಮದವರು ಒಗ್ಗೂಡಿ ಆಚರಿಸುವ ಕಾರ್ಯಕ್ರಮವೇ ಹೊರತು, ಯಾವುದೇ ಧರ್ಮ ಅಥವಾ ಪಕ್ಷಕ್ಕೆ ಸೀಮಿತವಲ್ಲ ಎಂದು ಹೇಳಿದ್ದರು.
ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್ ಹಾಗೂ ಪ್ರಮೋದ್ ಮುತಾಲಿಕ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಆಹ್ವಾನದ ಮೇರೆಗೆ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ನಾನು ಸಹ ಅತಿಥಿಯಾಗಿ ಭಾಗಿಯಾಗಿದ್ದೇನೆ ಮತ್ತು ಇದು ನನ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವಲ್ಲ. ಇದಕ್ಕಿಂತಲೂ ಮಿಗಿಲಾಗಿ ಇಡೀ ಕಾರ್ಯಕ್ರಮದಲ್ಲಿ ಎಲ್ಲಿಯೂ ಕೋಮುವಿಚಾರಗಳ ಚರ್ಚೆ ಅಥವಾ ಭಾಷಣಕ್ಕೆ ಆಸ್ಪದ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು.
Leave feedback about this